Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ತಿಮೊಥೆಯನಿಗೆ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದುರ್ಬೋಧಕರು

1 ಆದರೂ ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ.

2 ಕಪಟದಿಂದ ಸುಳ್ಳಾಡುವವರು, ಸ್ವಂತ ಮನಸ್ಸಾಕ್ಷಿಯ ಮೇಲೆ ಬರೆಹಾಕಲ್ಪಟ್ಟವರಾಗಿದ್ದು,

3 ಅವರು ವಿಶ್ವಾಸಿಗಳಿಗೆ ಮದುವೆಯಾಗಬಾರದೆಂತಲೂ, ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ, ಅವರು ಕೃತಜ್ಞತಾಸ್ತುತಿಮಾಡಿ, ತಿನ್ನುವುದಕ್ಕೋಸ್ಕರ ದೇವರು ಉಂಟುಮಾಡಿದ ಆಹಾರವನ್ನು ತಿನ್ನಬಾರದೆಂತಲೂ ಹೇಳುವರು.

4 ದೇವರು ಉಂಟುಮಾಡಿದ್ದೆಲ್ಲವೂ ಒಳ್ಳೆಯದೇ, ನಾವು ಕೃತಜ್ಞತಾಸ್ತುತಿಮಾಡಿ ತೆಗೆದುಕೊಳ್ಳುವ ಯಾವ ಆಹಾರವನ್ನು ತಿರಸ್ಕರಿಸಬೇಕಾಗಿಲ್ಲ.

5 ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಆ ಆಹಾರವು ಪವಿತ್ರವಾಗುತ್ತದಲ್ಲಾ.

6 ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ, ನೀನು ಅನುಸರಿಸುತ್ತಿರುವ ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಅಭ್ಯಾಸಹೊಂದಿದವನಾಗಿ, ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವಿ.

7 ಅಜ್ಜಿ ಕಥೆಗಳನ್ನೂ ಪ್ರಾಪಂಚಿಕವಾದ ಆ ಕಥೆಗಳನ್ನೂ ತಳ್ಳಿಬಿಟ್ಟು, ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ.

8 ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು. ಅದಕ್ಕೆ ಇಹಪರಗಳಲ್ಲಿನ ಜೀವನಕ್ಕೆ ವಾಗ್ದಾನ ಉಂಟು.

9 ಈ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ.

10 ಇದಕ್ಕಾಗಿ ನಾವು ಕಷ್ಟಪಡುತ್ತಿದ್ದೇವೆ, ಪ್ರಯಾಸಪಡುತ್ತಿದ್ದೇವೆ, ಯಾಕೆಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡವರಾಗಿದ್ದೇವೆ.

11 ಈ ಸಂಗತಿಗಳನ್ನು ನೀನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು.

12 ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು.

13 ನಾನು ಬರುವ ತನಕ ವೇದವಾಕ್ಯವನ್ನು ಓದಿ ಹೇಳುವುದರಲ್ಲಿಯೂ, ಪ್ರಬೋಧಿಸುವುದರಲ್ಲಿಯೂ, ಉಪದೇಶಿಸುವುದರಲ್ಲಿಯೂ ಆಸಕ್ತನಾಗಿರು.

14 ನಿನ್ನಲ್ಲಿರುವ ಕೃಪಾವರವನ್ನು ಅಲಕ್ಷ್ಯಮಾಡಬೇಡ, ಆ ವರವು ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ, ಅದು ನಿನಗೆ ಕೊಡಲ್ಪಟ್ಟಿತಲ್ಲಾ.

15 ಈ ಕಾರ್ಯಗಳನ್ನು ಸಾಧಿಸುತ್ತಾ, ಅವುಗಳಲ್ಲಿ ಮಗ್ನನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವುದು.

16 ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು, ಆಗ ನೀನು ನಿನ್ನನ್ನೂ ಮತ್ತು ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು