1 ಕೊರಿಂಥದವರಿಗೆ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆದರೆ ಸಹೋದರರೇ ನಾನಂತೂ ಆತ್ಮೀಕರೊಂದಿಗೆ ಮಾತನಾಡುವಂತೆ ನಿಮ್ಮ ಸಂಗಡ ಮಾತನಾಡದೆ ಪ್ರಾಪಂಚಿಕರೂ ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವವರ ಹಾಗೆ ನಿಮ್ಮ ಸಂಗಡ ಮಾತನಾಡಬೇಕಾಯಿತು. 2 ನಿಮಗೆ ಹಾಲು ಕುಡಿಸಿದೆನು ಆಹಾರ ಕೊಡಲಿಲ್ಲ. ಆಹಾರವನ್ನು ತಿನ್ನುವುದಕ್ಕೆ ನೀವು ಇನ್ನೂ ಸಮರ್ಥರಾಗಿರಲಿಲ್ಲ. ಈಗಲೂ ನೀವು ಸಮರ್ಥರಾಗಿಲ್ಲ. 3 ಯಾಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ನಿಮ್ಮಲ್ಲಿ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ, ನೀವು ಪ್ರಾಪಂಚಿಕರಾಗಿದ್ದು ಕೇವಲ ಬೇರೆ ಮನುಷ್ಯರಂತೆ ನಡೆಯುತ್ತೀರಲ್ಲವೆ? 4 ಒಬ್ಬನು, “ನಾನು ಪೌಲನವನು” ಎಂದು, ಮತ್ತೊಬ್ಬನು, “ನಾನು ಅಪೊಲ್ಲೋಸನವನು” ಎಂದು ಹೇಳುತ್ತಿರುವಾಗ ನೀವು ಇನ್ನೂ ಕೇವಲ ಸಾಮಾನ್ಯ ಮನುಷ್ಯರೇ ಆಗಿದ್ದೀರಲ್ಲವೇ? ಸುವಾರ್ತೆಯನ್ನು ಸಾರುವವರು ದೇವರ ಕೈಯಲ್ಲಿ ಬರೀ ಸಾಧನಗಳಷ್ಟೆ, ಕಾರ್ಯಕರ್ತನು ದೇವರೇ 5 ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರ ಸೇವೆಯ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ ಕರ್ತನು ಪ್ರತಿಯೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ. 6 ನಾನು ಸಸಿಯನ್ನು ನೆಟ್ಟೆನು. ಅಪೊಲ್ಲೋಸನು ನೀರನ್ನು ಹೊಯ್ಯಿದನು. ಆದರೆ ಅದನ್ನು ಬೆಳೆಸಿದವನು ದೇವರೇ. 7 ಹೀಗಿರಲಾಗಿ ನೆಡುವವನಾಗಲಿ, ನೀರುಹೊಯ್ಯುವವನಾಗಲಿ ಮುಖ್ಯವಾದವನಲ್ಲ. ಬೆಳೆಸುವ ದೇವರೇ ಪ್ರಾಮುಖ್ಯವಾದಾತನು. 8 ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು. 9 ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ. ದೇವರ ಮಂದಿರವೂ ಆಗಿದ್ದೀರಿ. 10 ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು. 11 ಯೇಸು ಕ್ರಿಸ್ತನೆಂಬ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ. 12 ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನಗಳು, ಕಟ್ಟಿಗೆ, ಹುಲ್ಲು, ಆಪು ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿದರೂ, 13 ಅವನವನ ಕೆಲಸವು ಪ್ರಕಟವಾಗುವುದು. ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವುದು. ಅವನವನ ಕೆಲಸವೆಂಥದೆಂಬುದನ್ನು ಆ ಬೆಂಕಿ ಶೋಧಿಸುವುದು. 14 ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಪ್ರತಿಫಲ ಸಿಕ್ಕುವುದು. 15 ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವುದು. ತಾನಾದರೋ ರಕ್ಷಣೆ ಹೊಂದುವನು. ಆದರೆ ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು. 16 ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? 17 ಯಾವನಾದರೂ ದೇವರ ಆಲಯವನ್ನು ನಾಶಪಡಿಸಿದರೆ ದೇವರು ಅವನನ್ನು ನಾಶಪಡಿಸುವನು. ಯಾಕೆಂದರೆ ದೇವರ ಆಲಯವು ಪವಿತ್ರವಾದದ್ದು ಆ ಆಲಯವು ನೀವೇ ಆಗಿದ್ದೀರಿ. 18 ಯಾವನೂ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳದಿರಲಿ ನಿಮ್ಮಲ್ಲಿ ಯಾವನಾದರೂ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವುದಾದರೆ ಅವನು ಜ್ಞಾನಿಯಾಗುವುದಕ್ಕಾಗಿ “ಮೂರ್ಖನಾಗಲಿ” 19 ಯಾಕೆಂದರೆ ಇಹಲೋಕದ ಜ್ಞಾನವು ದೇವರ ಮುಂದೆ ಮೂರ್ಖತನವಾಗಿದೆ. “ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೆ ಹಿಡಿದುಕೊಳ್ಳುತ್ತಾನೆಂತಲೂ,” 20 “ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನು ತಿಳಿದುಕೊಳ್ಳುತ್ತಾನೆಂತಲೂ” ಬರೆದದೆಯಲ್ಲಾ 21 ಆದಕಾರಣ ಮನುಷ್ಯಮಾತ್ರದವರ ವಿಷಯದಲ್ಲಿ ಯಾರೂ ಹೊಗಳಿಕೊಳ್ಳದಿರಲಿ. ಯಾಕೆಂದರೆ ಸಮಸ್ತವೂ ನಿಮಗಾಗಿಯೇ ಇದೆ. 22 ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ ಲೋಕವಾಗಲಿ, ಜೀವವಾಗಲಿ ಮರಣವಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ. 23 ನೀವಂತೂ ಕ್ರಿಸ್ತನವರು, ಕ್ರಿಸ್ತನು ದೇವರಿನವನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.