Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆರೂಸಲೇಮಿನಲ್ಲಿದ್ದ ಬಡ ಕ್ರೈಸ್ತರಿಗೋಸ್ಕರ ಧರ್ಮದ ಹಣ ಕೂಡಿಸುವುದನ್ನು ಕುರಿತದ್ದು

1 ಈಗ ದೇವಜನರಿಗೋಸ್ಕರ ಹಣ ಸಂಗ್ರಹಣೆ ವಿಚಾರದ ಕುರಿತು, ನಾನು ಗಲಾತ್ಯ ಪ್ರಾಂತ್ಯದ ಸಭೆಗಳಿಗೆ ಹೇಳಿಕೊಟ್ಟಿರುವ ಕ್ರಮದಂತೆ ನೀವೂ ಮಾಡಿರಿ.

2 ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದಂಥ ಸಂಪಾದನೆಯಲ್ಲಿ ಸಾಧ್ಯವಾದಷ್ಟನ್ನು ವಾರದ ಮೊದಲನೆಯ ದಿನದಲ್ಲಿ ಸಂಗ್ರಹಿಸಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು. ಇದರಿಂದ ನಾನು ಬಂದಾಗ ಹಣ ಸಂಗ್ರಹಣೆ ಮಾಡುವ ಅಗತ್ಯವಿರುವುದಿಲ್ಲ.

3 ಮತ್ತು ನಾನು ಬಂದ ಮೇಲೆ ನೀವು ಯಾರನ್ನು ಪ್ರಾಮಾಣಿಕರೆಂದು ಸೂಚಿಸುವಿರೋ, ಅವರೊಂದಿಗೆ ನಿಮ್ಮ ಕೊಡುಗೆಯನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋಗುವುದಕ್ಕೆ ಪತ್ರಗಳನ್ನು ಕೊಟ್ಟು ಕಳುಹಿಸುವೆನು.

4 ಮತ್ತೆ ನಾನು ಸಹ ಹೋಗುವುದು ಯುಕ್ತವಾಗಿ ತೋರಿದರೆ ಅವರು ನನ್ನ ಜೊತೆಯಲ್ಲಿ ಬರಬಹುದು.

5 ನಾನು ಹಾದುಹೋಗಬೇಕೆಂದಿರುವ ಮಕೆದೋನ್ಯ ಸೀಮೆಯನ್ನು ದಾಟುವಾಗ ನಿಮ್ಮ ಬಳಿಗೆ ಬಂದು ಬಹುಶಃ ನಿಮ್ಮ ಬಳಿಯಲ್ಲೇ ಉಳಿದುಕೊಳ್ಳುವೆನು.

6 ಅಥವಾ ನಿಮ್ಮಲ್ಲಿ ಹಿಮಕಾಲವನ್ನಾದರೂ ಕಳೆಯುವೆನು; ಹಾಗೆಯೇ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಸಾಗಕಳುಹಿಸಲು ಸಹಾಯಮಾಡಬಹುದು.

7 ನಾನು ಹಾದುಹೋಗುವ ಈ ಸ್ವಲ್ಪ ಸಮಯದಲ್ಲಿ ನಿಮ್ಮನ್ನು ನೋಡಲು ಬಯಸುವುದಿಲ್ಲ. ಕರ್ತನ ಅಪ್ಪಣೆಯಾದರೆ ನಿಮ್ಮ ಬಳಿಯಲ್ಲಿ ಕೆಲವು ಕಾಲ ತಂಗಲು ಬಯಸುತ್ತೇನೆ.

8 ಪಂಚಾಶತ್ತಮ ದಿನ ಹಬ್ಬದ ತನಕ ಎಫೆಸದಲ್ಲಿರುವೆನು;

9 ಯಾಕೆಂದರೆ ಸೇವೆಗೆ ಅನುಕೂಲವೂ, ಸಫಲವೂ ಆಗಿರುವ ಹೆಬ್ಬಾಗಿಲೊಂದು ನನಗಾಗಿ ತೆರೆಯಲ್ಪಟ್ಟಿದೆ. ಹಾಗೆಯೇ ವಿರೋಧಿಗಳೂ ಅನೇಕರಿದ್ದಾರೆ.

10 ತಿಮೊಥೆಯನು ಬಂದರೆ ಅವನು ನಿಮ್ಮಲ್ಲಿ ನಿರ್ಭಯನಾಗಿರುವಂತೆ ನೋಡಿಕೊಳ್ಳಿರಿ; ಅವನು ಸಹ ನನ್ನ ಹಾಗೆಯೇ ಕರ್ತನ ಸೇವೆಯನ್ನು ಮಾಡುತ್ತಿದ್ದಾನಲ್ಲಾ.

11 ಆದ್ದರಿಂದ ಯಾರೂ ಅವನನ್ನು ತಿರಸ್ಕರಿಸಬಾರದು. ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವುದನ್ನು ಎದುರುನೋಡುತ್ತಾ ಇದ್ದೇನೆ.

12 ಸಹೋದರ ಅಪೊಲ್ಲೋಸನ ಕುರಿತು; ಅವನು ಸಹೋದರರೊಂದಿಗೆ ನಿಮ್ಮನ್ನು ಭೇಟಿಮಾಡಬೇಕೆಂದು ನಾನು ಬಹಳವಾಗಿ ಅವನನ್ನು ಪ್ರೋತ್ಸಾಹಿಸಿದೆನು. ಆದರೆ ಅವನು ಈಗ ಬರುವುದಿಲ್ಲ ಎಂದು ನಿರ್ಧರಿಸಿದನು. ಆದರೆ ಒಳ್ಳೆ ಅವಕಾಶ ಸಿಕ್ಕಿದಾಗ ಬರುವನು.


ಕೊನೆಯ ಮಾತುಗಳು

13 ಎಚ್ಚರವಾಗಿರಿ, ಕ್ರಿಸ್ತ ನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ. ಧೈರ್ಯವಂತರಾಗಿರಿ, ಬಲಗೊಳ್ಳಿರಿ.

14 ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.

15 ಸ್ತೆಫನನ ಮನೆಯವರು ಅಖಾಯದಲ್ಲಿನ ಪ್ರಥಮಫಲವೆಂದು ಹಾಗೂ ಅವರು ದೇವಜನರ ಸೇವೆಗೋಸ್ಕರ ತಮ್ಮನ್ನು ಅರ್ಪಿಸಿದ್ದಾರೆಂದು ನೀವು ಬಲ್ಲವರಾಗಿದ್ದೀರಿ.

16 ನಾನು ನಿಮ್ಮಲ್ಲಿ ಬೇಡುವುದೇನಂದರೆ, ಸೇವೆಯಲ್ಲಿ ನಮಗೆ ಸಹಾಯಮಾಡುವ ಹಾಗೂ ಪ್ರಯಾಸಪಡುವವರೆಲ್ಲರಿಗೂ ನೀವು ಅಧೀನರಾಗಿರಬೇಕು.

17 ಸ್ತೆಫನನೂ, ಪೊರ್ತುನಾತೊಸನೂ, ಅಖಾಯಿಕನೂ ಬಂದದ್ದು ನನಗೆ ಸಂತೋಷವನ್ನುಂಟುಮಾಡಿದೆ. ನಿಮ್ಮಿಂದ ಆಗಿರುವ ಕೊರತೆಯನ್ನು ಅವರು ನೀಗಿಸಿರುವರು.

18 ಅವರು ನನ್ನ ಆತ್ಮವನ್ನೂ ಮತ್ತು ನಿಮ್ಮ ಆತ್ಮಗಳನ್ನೂ ಚೈತನ್ಯಗೊಳಿಸಿದರಲ್ಲ. ಹೀಗಿರುವುದರಿಂದ ಇಂಥವರನ್ನು ಸನ್ಮಾನಿಸಿರಿ.

19 ಆಸ್ಯಸೀಮೆಯ ಸಭೆಗಳವರು ನಿಮ್ಮನ್ನು ವಂದಿಸುತ್ತಾರೆ. ಅಕ್ವಿಲನೂ ಮತ್ತು ಪ್ರಿಸ್ಕಿಲ್ಲಳೂ ತಮ್ಮ ಮನೆಯಲ್ಲಿ ಕೂಡಿ ಬರುವ ಸಭೆಯವರೊಂದಿಗೆ ಕರ್ತನ ಹೆಸರಿನಲ್ಲಿ ಬಹಳವಾಗಿ ನಿಮ್ಮನ್ನು ವಂದಿಸುತ್ತಿದ್ದಾರೆ.

20 ಸಹೋದರರೆಲ್ಲರೂ ನಿಮಗೆ ವಂದನೆ ಹೇಳುತ್ತಿದ್ದಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.

21 ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ.

22 ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ ಅವನು ಶಾಪಗ್ರಸ್ತನಾಗಲಿ. ನಮ್ಮ ಕರ್ತನೇ ಬಾ!

23 ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ

24 ಕ್ರಿಸ್ತ ಯೇಸುವಿನಲ್ಲಿ ನನ್ನ ಪ್ರೀತಿಯು ನಿಮ್ಮೆಲ್ಲರೊಂದಿಗೆ ಇರಲಿ. ಅಮೆನ್.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು