Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.


ಸ್ತ್ರೀಯರು ಮುಸುಕಿಲ್ಲದೆ ಸಭೆಯಲ್ಲಿ ದೇವಾರಾಧನೆ ಮಾಡುವುದು ಯುಕ್ತವಲ್ಲ

2 ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ತಿಳಿಸಿಕೊಟ್ಟ ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.

3 ಆದರೂ ನೀವು ಒಂದು ಸಂಗತಿಯನ್ನು ತಿಳಿದಿರಬೇಕೆಂಬುದು ನನ್ನ ಇಷ್ಟ. ಅದೇನೆಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆಯಾಗಿದ್ದಾನೆ. ಸ್ತ್ರೀಗೆ ಪುರುಷನು ತಲೆಯಾಗಿದ್ದಾನೆ. ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ.

4 ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ, ಪ್ರವಾದನೆಯನ್ನಾಗಲಿ ಮಾಡುವ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.

5 ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಸ್ತ್ರೀಯು ಮುಸುಕಿಲ್ಲದೆ ಇರುವುದೂ ತಲೆಬೋಳಿಸಿಕೊಂಡಿರುವುದೂ ಒಂದೇ.

6 ಸ್ತ್ರೀಯು ಮುಸುಕು ಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗೆಯಿಸಿಬಿಡಬೇಕಷ್ಟೆ. ಆದರೆ ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ ಆಕೆಯು ಮುಸುಕನ್ನು ಹಾಕಿಕೊಳ್ಳಲಿ.

7 ಪುರುಷನು ದೇವರ ಪ್ರತಿರೂಪವೂ ಮತ್ತು ಪ್ರಭಾವವೂ ಆಗಿರುವುದರಿಂದ ತಲೆಯನ್ನು ಮುಚ್ಚಿಕೊಳ್ಳಬಾರದು. ಸ್ತ್ರೀಯಾದರೋ ಪುರುಷನ ಪ್ರಭಾವವಾಗಿದ್ದಾಳೆ.

8 ಪುರುಷನು ಸ್ತ್ರೀಯಿಂದ ಉತ್ಪತ್ತಿಯಾಗಲಿಲ್ಲ. ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು.

9 ಇದಲ್ಲದೆ ಪುರುಷನು ಸ್ತ್ರೀಗೋಸ್ಕರವಾಗಿ ಸೃಷ್ಟಿಸಲ್ಪಡಲಿಲ್ಲ, ಆದರೆ ಸ್ತ್ರೀಯು ಪುರುಷನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಳು.

10 ಹೀಗಿರುವುದರಿಂದ ದೂತರ ನಿಮಿತ್ತವಾಗಿ ಸ್ತ್ರೀಯು ಪುರುಷನ ಅಧಿಕಾರವನ್ನು ಸೂಚಿಸುವ ಮುಸುಕನ್ನು ತಲೆಯ ಮೇಲೆ ಹಾಕಿಕೊಂಡಿರಬೇಕು.

11 ಆದರೂ ಕರ್ತನ ವಿಷಯದಲ್ಲಿ ಪುರುಷರಿಲ್ಲದೆ ಸ್ತ್ರೀಯರೂ, ಸ್ತ್ರೀಯರಿಲ್ಲದೆ ಪುರುಷರೂ ಇಲ್ಲ.

12 ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ. ಆದರೆ ದೇವರೇ ಸಮಸ್ತವನ್ನು ಸೃಷ್ಟಿಸಿದಾತನು.

13 ನಿಮ್ಮೊಳಗೆ ನೀವೇ ಯೋಚಿಸಿ ತೀರ್ಮಾನಿಸಿಕೊಳ್ಳಿರಿ. ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವುದು ಯುಕ್ತವೋ

14 ಪುರುಷನು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನಕರವಾಗಿದೆಯೆಂದೂ,

15 ಸ್ತ್ರೀಯು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವಳಿಗೆ ಮುಸುಕಿಗೆ ಬದಲಾಗಿ ನೀಡಲಾಗಿದ್ದು ಅದು ಅವಳಿಗೆ ಗೌರವವಾಗಿದೆಯೆಂದೂ ಸ್ವಾಭಾವಿಕವಾಗಿ ನಿಮಗೆ ತಿಳಿಯುತ್ತದಲ್ಲವೋ?

16 ಯಾವನಾದರೂ ಇದರ ಕುರಿತು ವಾಗ್ವಾದ ಮಾಡುವುದಾದರೆ ಇಂಥ ಪದ್ಧತಿ ನಮ್ಮಲ್ಲಿ ಇಲ್ಲ ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳಿದುಕೊಳ್ಳಿರಿ.


ಕರ್ತನ ಭೋಜನವನ್ನು ಕ್ರಮತಪ್ಪಿ ಆಚರಿಸಿದ್ದನ್ನು ಕುರಿತದ್ದು

17 ನಾನು ಇನ್ನು ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ಯಾಕೆಂದರೆ ನೀವು ಒಟ್ಟಾಗಿ ಸೇರಿಬರುತ್ತಿರುವುದು ಕೇಡಿಗಾಗಿಯೇ ಹೊರತು ಮೇಲಿಗಾಗಿಯಲ್ಲ.

18 ಹೇಗೆಂದರೆ ಮೊದಲನೆಯದಾಗಿ ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಭಿನ್ನತೆ, ಭೇದಗಳು ಉಂಟಾಗುತ್ತವೆಂದು ಕೇಳಿದ್ದೇನೆ. ಮತ್ತು ಇದು ನಿಜವೆಂದು ಸ್ವಲ್ಪ ಮಟ್ಟಿಗೆ ನಂಬುತ್ತೇನೆ.

19 ನಿಮ್ಮಲ್ಲಿ ಕೆಲವರು ಯೋಗ್ಯರೆಂದು ಕಂಡುಬರುವುದಕ್ಕಾಗಿ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ.

20 ನೀವೆಲ್ಲರು ಸೇರಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ.

21 ಭೋಜನ ಮಾಡುವಲ್ಲಿ ಪ್ರತಿಯೊಬ್ಬನು ತಾನು ತಂದದ್ದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ. ಹೀಗೆ ಒಬ್ಬನು ಹಸಿದಿರುತ್ತಾನೆ ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.

22 ನಿಮಗೆ ತಿನ್ನುವುದಕ್ಕೂ, ಕುಡಿಯುವುದಕ್ಕೂ ಮನೆಗಳಿಲ್ಲವೋ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ಅವಮಾನಮಾಡುತ್ತೀರಾ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಹೊಗಳಲೋ? ಈ ವಿಷಯದಲ್ಲಿ ಹೊಗಳುವುದಿಲ್ಲ.


ಕರ್ತನ ಭೋಜನದ ವಿಷಯವಾಗಿ ಬೋಧನೆ

23 ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನೆಂದರೆ, ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು,

24 “ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು.

25 ಊಟವಾದ ಮೇಲೆ ಆತನು ಅದೇ ರೀತಿಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾನಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. ನೀವು ಇದರಲ್ಲಿ ಪಾನಮಾಡುವಾಗೆಲೆಲ್ಲಾ ನನ್ನನ್ನು ನೆನಪುಮಾಡಿಕೊಳ್ಳುವುದಕ್ಕೋಸ್ಕರ ಇದನ್ನು ಪಾನಮಾಡಿರಿ” ಅಂದನು.

26 ನೀವು ಈ ರೊಟ್ಟಿಯನ್ನು ತಿಂದು ಈ ಪಾನಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.

27 ಹೀಗಿರುವುದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾನಪಾತ್ರೆಯಲ್ಲಿ ಪಾನ ಮಾಡಿದರೆ ಅವನು ಕರ್ತನ ದೇಹಕ್ಕೂ ಮತ್ತು ಕರ್ತನ ರಕ್ತಕ್ಕೂ ಸಂಬಂಧಿಸಿದಂತೆ ದ್ರೋಹಮಾಡಿದವನಾಗಿರುವನು.

28 ಪ್ರತಿ ಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾನಪಾತ್ರೆಯಲ್ಲಿ ಕುಡಿಯಲಿ.

29 ಯಾಕೆಂದರೆ ಕರ್ತನ ದೇಹವೆಂದು ವಿವೇಚಿಸದೇ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವನು.

30 ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರು ಮತ್ತು ರೋಗಿಗಳು ಆಗುತ್ತಾರೆ ಮತ್ತು ಅನೇಕರು ಸಾಯುತ್ತಾರೆ.

31 ನಮ್ಮನ್ನು ನಾವೇ ಪರೀಕ್ಷಿಸಿಕೊಂಡರೆ ನ್ಯಾಯ ವಿಚಾರಣೆಗೊಳಗಾಗುವುದಿಲ್ಲ.

32 ಆದರೆ ನಾವು ಕರ್ತನಿಂದ ನ್ಯಾಯವಿಚಾರಣೆಗೆ ಒಳಗಾಗಿರಲಾಗಿ ಆತನು, ನಮಗೆ ಲೋಕದವರ ಸಂಗಡ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ನಮ್ಮನ್ನು ದಂಡನೆಗೆ ಗುರಿಪಡಿಸುತ್ತಾನೆ.

33 ಆದಕಾರಣ ನನ್ನ ಸಹೋದರರೇ, ಈ ಭೋಜನವನ್ನು ಮಾಡುವುದಕ್ಕೆ ಸೇರಿಬರುವಾಗ ಒಬ್ಬರು ಇನ್ನೊಬ್ಬರಿಗಾಗಿ ಕಾಯಿರಿ.

34 ಒಬ್ಬನು ಹಸಿದರೆ ಅವನು ಮನೆಯಲ್ಲೇ ಊಟಮಾಡಲಿ ನೀವು ಸೇರಿಬಂದದ್ದು ನ್ಯಾಯ ತೀರ್ಪಿಗೊಳಗಾಗುವುದಕ್ಕೆ ಕಾರಣವಾಗಬಾರದು. ಇನ್ನುಳಿದಿರುವ ಸಂಗತಿಗಳನ್ನು ನಾನು ಬಂದ ನಂತರ ಆದೇಶಿಸುತ್ತೇನೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು