1 ಕೊರಿಂಥದವರಿಗೆ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಪೀಠಿಕೆ 1 ದೇವರ ಚಿತ್ತದಂತೆ ಯೇಸು ಕ್ರಿಸ್ತನಿಂದ ಅಪೊಸ್ತಲನಾಗುವುದಕ್ಕೆ ಕರೆಯಲ್ಪಟ್ಟ ಪೌಲನೂ ಮತ್ತು ನಮ್ಮ ಸಹೋದರನಾದ ಸೊಸ್ಥೆನನೂ, 2 ಕೊರಿಂಥದಲ್ಲಿನ ದೇವರ ಸಭೆಗೆ ಅಂದರೆ ಕ್ರಿಸ್ತ ಯೇಸುವಿನಲ್ಲಿ ಪ್ರತಿಷ್ಠಿತರಾದವರಿಗೂ, ಪರಿಶುದ್ಧರಾಗಿರಲು ಕರೆಯಲ್ಪಟ್ಟವರಿಗೂ, ನಮ್ಮ ಮತ್ತು ಅವರ ಕರ್ತನಾಗಿರುವ ಯೇಸು ಕ್ರಿಸ್ತನ ನಾಮಸ್ಮರಣೆಯನ್ನು ಮಾಡುವವರೆಲ್ಲಿದ್ದರೂ ಅವರೆಲ್ಲರಿಗೂ ಬರೆಯುವುದು ಏನೆಂದರೆ, 3 ನಮ್ಮ ತಂದೆಯಾಗಿರುವ ದೇವರಿಂದಲೂ ಹಾಗೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಉಂಟಾಗಲಿ. ಪೌಲನು ಸಭೆಯವರ ವಿಷಯದಲ್ಲಿ ದೇವರಿಗೆ ಮಾಡಿದ ಕೃತಜ್ಞತಾಸ್ತುತಿ 4 ಕ್ರಿಸ್ತ ಯೇಸುವಿನಲ್ಲಿ ದೇವರು ನಿಮಗೆ ಅನುಗ್ರಹಿಸಿದ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ಯಾವಾಗಲೂ ನನ್ನ ದೇವರನ್ನು ಕೊಂಡಾಡುತ್ತೇನೆ. 5 ಆತನು ಎಲ್ಲಾ ರೀತಿಯಲ್ಲಿಯೂ, ಎಲ್ಲಾ ನುಡಿಗಳಲ್ಲಿಯೂ, ಎಲ್ಲಾ ತಿಳಿವಳಿಕೆಯಲ್ಲಿಯೂ, ನಿಮ್ಮನ್ನು ಸಮೃದ್ಧಿಯುಳ್ಳವರನ್ನಾಗಿ ಮಾಡಿದ್ದಾನೆ. 6 ಕ್ರಿಸ್ತನ ಕುರಿತಾದ ಸಾಕ್ಷಿಯು ನಿಮ್ಮಲ್ಲಿ ದೃಢವಾಗಿರುವ ಹಾಗೆಯೇ ಆತನು ನಿಮ್ಮನ್ನು ಸಮೃದ್ಧಿಯುಳ್ಳವರನ್ನಾಗಿ ಮಾಡಿದ್ದಾನೆ. 7 ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯನ್ನು ನೀವು ಎದುರುನೋಡುತ್ತಾ ಇರುವುದರಿಂದ ಆತ್ಮೀಕ ಕೃಪಾವರದ ಕೊರತೆಯೂ ನಿಮಗೆ ಉಂಟಾಗುವುದಿಲ್ಲ, 8 ನಮ್ಮ ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ನೀವು ನಿರಪರಾಧಿಗಳಾಗಿರುವಂತೆ ಆತನು ನಿಮ್ಮನ್ನು ಕಡೆಯವರೆಗೂ ದೃಢಪಡಿಸುವನು. 9 ತನ್ನ ಮಗನೂ ಹಾಗೂ ನಮ್ಮ ಕರ್ತನಾಗಿರುವ ಯೇಸು ಕ್ರಿಸ್ತನ ಅನ್ಯೋನ್ಯತೆಗೆ ನಿಮ್ಮನ್ನು ಕರೆದ ದೇವರು ನಂಬಿಗಸ್ತನು. ಕೊರಿಂಥ ಸಭೆಯಲ್ಲಿ ಉಂಟಾದ ಬೇಧಗಳು (1:10, 4:20) 10 ಪ್ರಿಯರೇ, ನೀವೆಲ್ಲರೂ ಹೊಂದಾಣಿಕೆಯುಳ್ಳವರಾಗಿರಬೇಕೆಂದು, ನಿಮ್ಮಲ್ಲಿ ಭಿನ್ನತೆಗಳಿರಬಾರದೆಂದು, ನೀವು ಒಂದೇ ಮನಸ್ಸೂ ಮತ್ತು ಒಂದೇ ಉದ್ದೇಶವುಳ್ಳವರಾಗಿದ್ದು ಐಕ್ಯತೆಯಿಂದಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬುದ್ಧಿ ಹೇಳುತ್ತೇನೆ. 11 ಯಾಕೆಂದರೆ ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಜಗಳಗಳುಂಟೆಂದು ನಿಮ್ಮ ಬಗ್ಗೆ ಖ್ಲೋಯೆಯ ಜನರಿಂದ ನನಗೆ ತಿಳಿದು ಬಂದಿತು. 12 ಹೀಗಾಗಿ ನಾನಿದನ್ನು ಹೇಳುತ್ತಿದ್ದೇನೆ, ನಿಮ್ಮೊಳಗೆ ಕೆಲವರು, “ನಾನು ಪೌಲನವನು,” ಇಲ್ಲವೆ, “ನಾನು ಅಪೊಲ್ಲೋಸನವನು,” ಅಥವಾ, “ನಾನು ಕೇಫನವನು,” ಇಲ್ಲವೆ, ನಾನು ಕ್ರಿಸ್ತನವನು ಎಂದು ಹೇಳಿಕೊಳ್ಳುತ್ತಾನಂತೆ. 13 ಕ್ರಿಸ್ತನು ವಿಭಾಗಿಸಲ್ಪಟ್ಟಿದ್ದಾನೋ? ನಿಮಗೋಸ್ಕರ ಶಿಲುಬೆಗೇರಿದವನು ಪೌಲನೋ? ಪೌಲನ ಹೆಸರಿನಲ್ಲಿ ನೀವು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೀರೋ? 14 ನಿಮ್ಮಲ್ಲಿ ಕ್ರಿಸ್ಪನಿಗೂ ಮತ್ತು ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ದೀಕ್ಷಾಸ್ನಾನ ಮಾಡಿಸಲಿಲ್ಲ. 15 ಆದ್ದರಿಂದ ನೀವು ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೀರೆಂದು ಯಾರೂ ಹೇಳಲಾರರು. ಅದಕ್ಕಾಗಿ ನಾನು ದೇವರಿಗೆ ಸ್ತೋತ್ರಮಾಡುತ್ತೇನೆ. 16 ಇದಲ್ಲದೆ ಸ್ತೆಫನನ ಮನೆಯವರಿಗೆ ಸಹ ದೀಕ್ಷಾಸ್ನಾನಮಾಡಿಸಿದ್ದೇನೆ ಇದನ್ನು ಹೊರತು ಇನ್ನಾರಿಗೂ ನಾನು ದೀಕ್ಷಾಸ್ನಾನಮಾಡಿಸಿದಂತೆ ತೋರುವುದಿಲ್ಲ. 17 ಕ್ರಿಸ್ತನು ನನ್ನನ್ನು ಕಳುಹಿಸಿದ್ದು ದೀಕ್ಷಾಸ್ನಾನಮಾಡಿಸುವುದಕ್ಕಲ್ಲ ಆದರೆ ಸುವಾರ್ತೆಯನ್ನು ಸಾರುವುದಕ್ಕಾಗಿಯೇ. ಅದನ್ನು ಮನುಷ್ಯಜ್ಞಾನದ ಮಾತುಗಳಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಶಿಲುಬೆಯ ಶಕ್ತಿಯು ಮಾತಿನ ಚತುರತೆಯಿಂದ ನಿರರ್ಥಕವಾಗಿ ಹೋಗುತ್ತದೆ. ಕ್ರಿಸ್ತನ ಸುವಾರ್ತೆಯು ಮನುಷ್ಯಜ್ಞಾನಕ್ಕೆ ಅನುಸಾರವಾದದ್ದಲ್ಲ 18 ಶಿಲುಬೆಯ ಸಂದೇಶವು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುತನವಾಗಿದೆ, ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗೆ ಇದು ದೇವರ ಶಕ್ತಿಯಾಗಿದೆ. 19 “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು, ವಿವೇಕಿಗಳ ವಿವೇಕವನ್ನು ವಿಫಲಗೊಳಿಸುವೆನು.” ಎಂದು ಬರೆಯಲ್ಪಟ್ಟಿದೆ. 20 ಜ್ಞಾನಿಯು ಎಲ್ಲಿ? ವಿದ್ವಾಂಸನು ಎಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ? ದೇವರು ಇಹಲೋಕದ ಜ್ಞಾನವನ್ನು ಮೂರ್ಖತನವಾಗಿ ಮಾಡಿದ್ದಾನಲ್ಲವೇ? 21 ಲೋಕವು ತನ್ನ ಜ್ಞಾನದಿಂದ ದೇವರನ್ನು ತಿಳಿದುಕೊಳ್ಳದೆ ಹೋದದ್ದರಿಂದ; ಮೂರ್ಖತನವೆನಿಸಿಕೊಂಡಿರುವ ನಮ್ಮ ಬೋಧನೆಯ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಹಿತವೆಂದು ತೋರಿತು. 22 ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; 23 ನಾವಾದರೋ ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನನ್ನು ಸಾರುತ್ತೇವೆ; ಕ್ರಿಸ್ತನ ಸಂದೇಶವು ಯೆಹೂದ್ಯರಿಗೆ ವಿಘ್ನವೂ ಮತ್ತು ಗ್ರೀಕರಿಗೆ ಮೂರ್ಖತನವೂ ಆಗಿದೆ. 24 ಆದರೆ ದೇವರಿಂದ ಕರಿಸಿಕೊಂಡವರಾದ ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ ಕ್ರಿಸ್ತನೇ ದೇವರ ಶಕ್ತಿಯೂ ಮತ್ತು ದೇವರ ಜ್ಞಾನವೂ ಆಗಿರುವಾತನೆಂದು ನಾವು ಸಾರುತ್ತೇವೆ. 25 ದೇವರ ಬುದ್ಧಿಹೀನತೆಯು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು, ದೇವರ ಬಲಹೀನತೆಯು ಮನುಷ್ಯರ ಬಲಕ್ಕಿಂತಲೂ ಶಕ್ತಿಯುಳ್ಳದ್ದಾಗಿದೆ. 26 ಸಹೋದರರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದೀರೆಂದು ಆಲೋಚಿಸಿರಿ. ಮನುಷ್ಯರ ದೃಷ್ಟಿಯಲ್ಲಿ ನಿಮ್ಮೊಳಗೆ ಜ್ಞಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ, ಪ್ರಬಲರೂ ಅನೇಕರಿರಲಿಲ್ಲ, ಕುಲೀನರೂ ಅನೇಕರಿರಲಿಲ್ಲ. 27 ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡನು; ದೇವರು ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಈ ಲೋಕದ ಅಶಕ್ತರನ್ನು, ಬಲಹೀನರನ್ನು ಆರಿಸಿಕೊಂಡನು. 28 ದೇವರು ಈ ಲೋಕದಲ್ಲಿ ಕೀಳಾದವರನ್ನೂ ಹಾಗೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವುದಕ್ಕಾಗಿ ಗಣನೆಗೆ ಬಾರದವರನ್ನು, ನಿಂದಿಸಲ್ಪಟ್ಟವರನ್ನು ಆರಿಸಿಕೊಂಡಿದ್ದಾನೆ. 29 ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ. 30 ದೇವರು ಈ ರೀತಿ ಮಾಡಿದ್ದರಿಂದಲೇ ಈಗ ನೀವು ಕ್ರಿಸ್ತ ಯೇಸುವಿನಲ್ಲಿದ್ದೀರಿ. ಕ್ರಿಸ್ತ ಯೇಸು ದೇವರ ಕಡೆಯಿಂದ ನಮಗೆ ಜ್ಞಾನವೂ, ನೀತಿಯೂ, ಶುದ್ಧಿಯೂ, ಮತ್ತು ವಿಮೋಚನೆಯು ಆಗಿದ್ದಾನೆ. 31 “ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ” ಎಂಬ ವೇದೋಕ್ತಿ ನೆರವೇರುವುದಕ್ಕಾಗಿಯೇ ಹೀಗಾಯಿತು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.