Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಅರಸುಗಳು 9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆಹೋವನು ಸೊಲೊಮೋನನಿಗೆ ಪುನಃ ಪ್ರತ್ಯಕ್ಷನಾದದ್ದು

1 ಸೊಲೊಮೋನನು ಯೆಹೋವನ ಆಲಯವನ್ನೂ ತನ್ನ ಅರಮನೆಯನ್ನೂ ಕಟ್ಟಿಸಿದ ನಂತರ,

2 ಯೆಹೋವನು ಅವನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷನಾದಂತೆ ಎರಡನೆಯ ಸಾರಿ ಪ್ರತ್ಯಕ್ಷನಾದನು.

3 ಆತನು ಅವನಿಗೆ, “ನೀನು ನನಗೆ ಮಾಡಿದ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆಯನ್ನೂ ಕೇಳಿದ್ದೇನೆ. ನನ್ನ ನಾಮಮಹತ್ತು ನೀನು ಕಟ್ಟಿಸಿದ ಆಲಯದಲ್ಲಿ ಸದಾ ಇರುವಂತೆ ಅದನ್ನು ನನಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ. ನನ್ನ ದೃಷ್ಟಿಯೂ, ಮನಸ್ಸೂ ಪ್ರತಿದಿನವೂ ಅದರ ಮೇಲಿರುವವು.

4 ನೀನು ನಿನ್ನ ತಂದೆಯಾದ ದಾವೀದನಂತೆ ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ನನಗೆ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುತ್ತಾ ಬರುವುದಾದರೆ,

5 ಇಸ್ರಾಯೇಲರಲ್ಲಿ ನಿನ್ನ ಸಿಂಹಾಸನವನ್ನು ಸದಾ ಸ್ಥಿರಪಡಿಸುವೆನು. ‘ಇಸ್ರಾಯೇಲ್ ಸಿಂಹಾಸನದ ಮೇಲೆ ನಿನ್ನ ಸಂತಾನದವರು ತಪ್ಪದೆ ಕುಳಿತುಕೊಳ್ಳುವರು’ ಎಂಬುದಾಗಿ ನಿನ್ನ ತಂದೆಯಾದ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.

6 ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ, ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳದೆ, ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಹಿಂಬಾಲಿಸಿ, ಅವುಗಳಿಗೆ ಕೈಮುಗಿಯುವುದಾದರೆ

7 ಇಸ್ರಾಯೇಲರನ್ನು ನಾನು ಅವರಿಗೆ ಕೊಟ್ಟ ದೇಶದಿಂದ ತೆಗೆದು ಹಾಕಿ, ನನ್ನ ಹೆಸರಿಗೋಸ್ಕರ ಪ್ರತಿಷ್ಠಿಸಿಕೊಂಡ ಆಲಯವನ್ನು ನಿರಾಕರಿಸಿಬಿಡುವೆನು. ‘ಇಸ್ರಾಯೇಲರು’ ಎಲ್ಲಾ ಜನಾಂಗಗಳವರ ಗಾದೆಗೂ ನಿಂದೆಗೂ, ಲೋಕದ ಅಪವಾದಕ್ಕೂ ಗುರಿಯಾಗುವಾಗುವರು.

8 ಉನ್ನತವಾದ ಈ ಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ, ‘ಅಬ್ಬಬ್ಬಾ ಇದೇನು, ಯೆಹೋವನು ಈ ದೇಶವನ್ನು ಮತ್ತು ಈ ಆಲಯವನ್ನೂ ಹೀಗೇಕೆ ಮಾಡಿದನು?’ ಎಂದು ಕೇಳುವರು.

9 ಆಗ ಈ ದೇಶದವರು ಅವರಿಗೆ, ‘ನಮ್ಮ ಪೂರ್ವಿಕರನ್ನು ಐಗುಪ್ತದಿಂದ ಬರಮಾಡಿದ ದೇವರಾದ ಯೆಹೋವನನ್ನು ಬಿಟ್ಟು, ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದಲೇ ಯೆಹೋವನು ಈ ಎಲ್ಲಾ ಆಪತ್ತನ್ನು ಬರಮಾಡಿದ್ದಾನೆ’ ಎಂಬ ಉತ್ತರ ಹೇಳುವರು” ಎಂದನು.


ಸೊಲೊಮೋನನು ಮಾಡಿದ ಇತರ ಸಂಗತಿಗಳು

10 ಅರಸನಾದ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವನ ಆಲಯವನ್ನೂ ಮತ್ತು ತನ್ನ ಅರಮನೆಯನ್ನೂ ಕಟ್ಟಿಸಿ ಮುಗಿಸಿದನು.

11 ಆನಂತರ ಅವನು ತನಗೆ ಬೇಕಾದಷ್ಟು ದೇವದಾರುಮರಗಳನ್ನೂ, ತುರಾಯಿಮರಗಳನ್ನೂ ಮತ್ತು ಬಂಗಾರವನ್ನೂ ಕೊಟ್ಟಂಥ ತೂರಿನ ಅರಸನಾದ ಹೀರಾಮನಿಗೆ ಗಲಿಲಾಯ ಪ್ರಾಂತ್ಯದಲ್ಲಿ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.

12 ಹೀರಾಮನು ತೂರಿನಿಂದ ಬಂದು ಆ ಪಟ್ಟಣಗಳನ್ನು ನೋಡಲು ಅವು ಅವನಿಗೆ ಮೆಚ್ಚಿಗೆಯಾಗಲಿಲ್ಲ.

13 ಆದುದರಿಂದ ಅವನು ಸೊಲೊಮೋನನಿಗೆ, “ಸಹೋದರನೇ, ನೀನು ನನಗೆ ಎಂಥಾ ಪಟ್ಟಣಗಳನ್ನು ಕೊಟ್ಟಿರುವೇ?” ಎಂದು ಹೇಳಿ ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಅವುಗಳಿಗೆ ಇಂದಿನವರೆಗೂ ಇದೇ ಹೆಸರಿರುತ್ತದೆ.

14 ಹೀರಾಮನು ಸೊಲೊಮೋನನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನು ಕೊಟ್ಟನು.

15 ಸೊಲೊಮೋನನ ಬಿಟ್ಟೀ ಕೆಲಸದವರು ಕಟ್ಟಿದವುಗಳು ಯಾವುವೆಂದರೆ, ಯೆಹೋವನ ಆಲಯ, ಅರಮನೆ, ಮಿಲ್ಲೋ ಕೋಟೆ, ಯೆರೂಸಲೇಮಿನ ಪೌಳಿಗೋಡೆ, ಹಾಚೋರ್ ಮೆಗಿದ್ದೋ ಮತ್ತು ಗೆಜೆರ್ ಇವುಗಳೇ.

16 ಐಗುಪ್ತದ ಅರಸನಾದ ಫರೋಹನು ಗೆಜೆರ್ ಪಟ್ಟಣವನ್ನು ಹಿಡಿದು ಅದಕ್ಕೆ ಬೆಂಕಿಹೊತ್ತಿಸಿ, ಅದರಲ್ಲಿದ್ದ ಕಾನಾನ್ಯರನ್ನು ಹತಿಸಿ, ಅದನ್ನು ವಶಮಾಡಿಕೊಂಡು ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಮದುವೆಯ ಉಡುಗೊರೆಯಾಗಿ ಕೊಟ್ಟಿದ್ದನು.

17 ಸೊಲೊಮೋನನು ಗೆಜೆರ್ ಪಟ್ಟಣದ ಹೊರತಾಗಿ ಕೆಳಗಿನ ಬೆತ್ ಹೋರೋನ್,

18 ಯೆಹೂದದ ಅರಣ್ಯಪ್ರದೇಶದಲ್ಲಿರುವ ಬಾಲಾತ್ ಮತ್ತು ತಾಮಾರ್,

19 ತನ್ನ ಎಲ್ಲಾ ಉಗ್ರಾಣ ಪಟ್ಟಣಗಳು, ಯುದ್ಧ ರಥಗಳನ್ನಿರಿಸುವ ಪಟ್ಟಣಗಳು, ರಾಹುತರ ಪಟ್ಟಣಗಳು ಇವುಗಳನ್ನೂ ಕಟ್ಟಿಸಿದನು. ಇದಲ್ಲದೆ ಯೆರೂಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತ್ಯಗಳಲ್ಲಿಯೂ ತನ್ನ ಮನಸ್ಸಿಗೆ ಬಂದವುಗಳನ್ನೆಲ್ಲಾ ಕಟ್ಟಿಸಿದನು.

20 ಇದಲ್ಲದೆ ಅವನು ಇಸ್ರಾಯೇಲರಿಂದ ಸಂಹೃತರಾದ ಅನ್ಯ ಜನರನ್ನೂ, ಕಾನಾನ್ ದೇಶದಲ್ಲಿ ಉಳಿದ ಅಮೋರಿಯ, ಹಿತ್ತಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ,

21 ಮೊದಲಾದ ಅನ್ಯಜನಾಂಗಗಳ ಸಂತಾನದವರೆಲ್ಲರನ್ನು ತನ್ನ ಕೆಲಸಕ್ಕಾಗಿ ಬಿಟ್ಟೀಹಿಡಿದನು. ಇಂದಿನ ವರೆಗೂ ಅವರು ಬಿಟ್ಟೀಕೆಲಸದವರಾಗಿರುತ್ತಾರೆ.

22 ಆದರೆ ಅವನು ಇಸ್ರಾಯೇಲರನ್ನು ಬಿಟ್ಟೀಹಿಡಿಯಲಿಲ್ಲ. ಅವರನ್ನು ಸೈನಿಕರನ್ನಾಗಿಯೂ, ಪರಿವಾರದವರನ್ನಾಗಿಯೂ ಅಧಿಪತಿಗಳನ್ನಾಗಿಯೂ, ಸರದಾರರನ್ನಾಗಿಯೂ, ರಥಾಶ್ವಬಲಗಳ ನಾಯಕರನ್ನಾಗಿಯೂ ನೇಮಿಸಿಕೊಂಡನು.

23 ಇದಲ್ಲದೆ ಅವನು ಬಿಟ್ಟೀಕೆಲಸ ಮಾಡುವವರ ಮೇಲೆ ಐನೂರೈವತ್ತು ಮಂದಿ ಇಸ್ರಾಯೇಲರನ್ನು ಅಧಿಕಾರಿಗಳನ್ನಾಗಿಯೂ ನೇಮಿಸಿದನು.

24 ಫರೋಹನ ಮಗಳು ದಾವೀದನಗರದಿಂದ ತನಗೋಸ್ಕರ ಕಟ್ಟಿಸಿದ ಅರಮನೆಗೆ ಬಂದಳು. ಅನಂತರ ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿದನು.

25 ಸೊಲೊಮೋನನು ಯೆಹೋವನ ಆಲಯದ ಮುಂದೆ ತಾನು ಯೆಹೋವನಿಗೋಸ್ಕರ ಕಟ್ಟಿಸಿದ ಯಜ್ಞವೇದಿಯ ಮೇಲೆ ವರ್ಷಕ್ಕೆ ಮೂರು ಸಾರಿ ಸರ್ವಾಂಗಹೋಮ, ಸಮಾಧಾನಯಜ್ಞ ಇವುಗಳನ್ನು ಸಮರ್ಪಿಸಿ ಧೂಪಹಾಕುತ್ತಿದ್ದನು. ಹೀಗೆ ಅವನು ದೇವಾಲಯವನ್ನು ಕಟ್ಟಿ ಸಂಪೂರ್ಣಗೊಳಿಸಿದನು.

26 ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದಲ್ಲಿ ಏಲೋತಿನ ಹತ್ತಿರ ಕೆಂಪುಸಮುದ್ರದ ತೀರದಲ್ಲಿರುವ ಎಚ್ಯೋನ್ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು.

27 ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರೊಡನೆ ಆ ಹಡಗುಗಳಲ್ಲಿ ಕಳುಹಿಸಿದನು.

28 ಅವರು ಓಫೀರಿಗೆ ಪ್ರಯಾಣಮಾಡಿ ಅಲ್ಲಿಂದ ಅರಸನಾದ ಸೊಲೊಮೋನನಿಗೆ ನಾನೂರಿಪ್ಪತ್ತು ತಲಾಂತು ಬಂಗಾರವನ್ನು ತೆಗೆದುಕೊಂಡು ಬಂದರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು